ಬರ್ಟೋಲ್ಟ್ ಬ್ರೆಕ್ಟ್ :  -
1898-1956. ಜರ್ಮನಿಯ ಶ್ರೇಷ್ಠಕವಿ, ನಾಟಕಕಾರ ಹಾಗೂ ನಿರ್ದೇಶಕ. ಎಪಿಕ್ ಥಿಯೇಟರ್ ಎಂಬ ಹೊಸ ನಾಟಕ ಸಿದ್ಧಾಂತವನ್ನು ಪ್ರಚುರಪಡಿಸಿ ಪ್ರಪಂಚದ ಅತ್ಯುತ್ತಮ ನಾಟಕಕಾರಲ್ಲಿ ಒಬ್ಬ ಎಂಬ ಖ್ಯಾತಿಗೆ ಪಾತ್ರನಾಗಿದ್ದಾನೆ. ಯುಜಿನ್ ಬರ್ಟೋಲ್ಟ್ ಫ್ರೆಡರಿಕ್ ಬ್ರೆಕ್ಟ್ ಎಂಬುದು ಇವನ ಪೂರ್ಣಹೆಸರು. 1898 ಫ್ರೆಬ್ರುವರಿ 10ರಂದು ದಕ್ಷಿಣ ಜರ್ಮನಿಯ ಆಕ್ಸ್‍ಬರ್ಗ್‍ನಲ್ಲಿ. ಶ್ರೀಮಂತ ಮನೆತನದಲ್ಲಿ ಜನಿಸಿದ. ಇವನ ತಂದೆ ಬರ್ಟೋಲ್ಟ್ ಬ್ರೆಕ್ಟ್ ರೋಮನ್ ಕ್ಯಾಥೋಲಿಕ್ ಪಂಥದ ಅನುಯಾಯಿ; ವೃತ್ತಿಯಿಂದ ಕಾಗದ ಕಾರ್ಖಾನೆಯೊಂದರ ವ್ಯವಸ್ಥಾಪಕ ನಿರ್ದೇಶಕ. ಬ್ರೆಕ್ಟ್‍ನ ತಾಯಿಯ ಹೆಸರು ಸೋಫಿ ಬ್ರೆಜಿಂಗ್; ಈಕೆ ಪ್ರಾಟಸ್ಟೆಂಟ್ ಪಂಥದ ಅನಯಾಯಿ ಎಂದೇ ಬ್ರೆಕ್ಟ್‍ಗೆ ಪ್ರಾಟಸ್ಟೆಂಟ್ ಚರ್ಚ್‍ನಲ್ಲಿ ಸಂಸ್ಕಾರ ದೊರೆಯಿತು. ಆರಂಭದ ವಿದ್ಯಾಭ್ಯಾಸವನ್ನು ಆಕ್ಸ್‍ಬರ್ಗ್‍ನ ಪಬ್ಲಿಕ್ ಸ್ಕೂಲ್‍ನಲ್ಲೂ ಅನಂತರ ರಿಯಲ್ ಜಿಮ್ನ್ಯಾಸಿಯಮ್‍ನಲ್ಲೂ ಪಡೆದ. ಬಳಕ ವೈದ್ಯ ಮತ್ತು ಪ್ರಕೃತಿ ವಿಜ್ಞಾನಗಳನ್ನು ಅಧ್ಯೆಯನ ಮಾಡಲು ಮ್ಯೂನಿಕ್‍ನ ಲುಡ್‍ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯ ಸೇರಿದ (1917). ಆದರೆ ಮೂರನೆಯ ವರ್ಷವೇ ಒಂದನೆಯ ಮಹಾಯುದ್ಧದ ಕಡ್ಡಾಯ ಸೈನ್ಯಸೇವೆಗೆ ಕರೆಬಂದುದರಿಂದ ವಿದ್ಯಾಭ್ಯಾಸವನ್ನು ಕಡಿತಗೊಳಿಸಿ, ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಚಾರಕನಾಗಿ ಕೆಲಸ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಬ್ರೆಕ್ಟ್‍ಗೆ ಯುದ್ಧದ ಬೀಭತ್ಸತೆಯ ದಟ್ಟ ಅನುಭವವಾಯಿತು. 1920ರ ವೇಳೆಗೆ ಈತ ಮ್ಯೂನಿಕ್ ನಾಟಕ ಶಾಲೆಯಲ್ಲಿ ಸಾಹಿತಿ-ಸಲಹೆಗಾರನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಇವನಿಗೆ ಆ ಕಾಲದ ಇಬ್ಬರು ಶ್ರೇಷ್ಠ ರಂಗನಿರ್ದೇಶಕರಾದ ಮ್ಯಾಕ್ಸ್‍ರೈನ್ ಹಾರ್ಟ್ ಮತ್ತು ಅರ್ವಿನ್ ಪಿಸ್ಕೇಟರ್ ಎಂಬವರ ಬಳಿ ಕೆಲಸ ಮಾಡುವ ಅವಕಾಶ ದೊರಕಿತು. 1922ರಲ್ಲಿ ಮಾರಿಯಾನಿ ಸಾಫ್ ಎಂಬವಳನ್ನು ವಿವಾಹವಾದ. ಐದು ವರ್ಷಗಳ ಅನಂತರ ಆಕೆಯೊಡನೆ ವಿವಾಹ ವಿಚ್ಛೇದವ ಪಡೆದ (1927). ಅದರ ಮಾರನೆಯ ವರ್ಷ ಸುಪ್ರಸಿದ್ಧ ನಟಿ ಹೆಲೆನ್ ವೈಗಿಲಳನ್ನು ವಿವಾಹವಾದ. ಆಕೆ ಬ್ರೆಕ್ಟ್‍ನ ಬದುಕಿನ ಕಡೆಯವರೆಗೆ ಸಂಗಾತಿಯಾಗಿದ್ದಳು.

	1933-34ರ ಅವಧಿ ಬ್ರೆಕ್ಟ್ ಜೀವನದ ಸಂಧಿಕಾಲ. ಈ ವೇಳೆಗಾಗಲೇ ಮಾಕ್ರ್ಸ್‍ವಾದ ಹಾಗೂ ಕಮ್ಯೂನಿಸಮ್‍ನಲ್ಲಿ ಒಲವು ಬೆಳೆಸಿಕೊಂಡಿದ್ದ ಈತ ನಾಜಿಗಳ ಕ್ರೂರ ದೃಷ್ಟಿಗೆ ಬಲಿಯಾಗಬೇಕಾಯಿತು. ಜರ್ಮನಿಯಲ್ಲಿ ಬುದ್ಧಿ ಜೀವಿಗಳಿಗೆ ಉಳಿಗಾಲವಿಲ್ಲದಂತಾಯಿತು. ಸರ್ಕಾರ ಬ್ರೆಕ್ಟ್‍ನ ಪುಸ್ತಕಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಂಡಿತು. ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಬ್ರೆಕ್ಟ್ ಸಂಸಾರದೊಡನೆ ದೇಶವನ್ನು ಬಿಟ್ಟೋಡಿ ತಲೆತಪ್ಪಿಸಿಕೊಳ್ಳಬೇಕಾಯಿತು. ಕೆಲಕಾಲ ಈತ ಆಸ್ಟ್ರಿಯಾ, ಸ್ವಿಟ್ಸರ್ಲೆಂಟ್, ಫ್ರಾನ್ಸ್ ದೇಶಗಳಲ್ಲಿ ಅಲೆದು ಡೆನ್‍ಮಾರ್ಕ್‍ನಲ್ಲಿ ನೆಲೆಸಿದ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಡೆನ್‍ಮಾರ್ಕ್‍ನಿಂದ ಫಿನ್ಲೆಂಡಿಗೆ ವಲಸೆ ಹೋದ. ಅಲ್ಲಿ ಪ್ರಸಿದ್ಧ ಕಾದಂಬರಿಗಾರ್ತಿ ಹೆಲ್ಲವ್ಯೋಕಿ ಎಂಬವಳ ಅತಿಥಿಯಾಗಿ ಕೆಲಕಾಲವಿದ್ದ. 1941ರ ವೇಳೆಗೆ ಅಮೆರಿಕಕ್ಕೆ ಹೋದ. ಅಲ್ಲಿ ಇವನಿಗೆ ಯೂರೋಪಿನ ಸುಪ್ರಸಿದ್ಧ ಸಾಹಿತಿಗಳನೇಕರ ಪರಿಚಯವಾಯಿತು. ಅದರೆ ಬ್ರೆಕ್‍ಗೆ ಅಮೆರಿಕನ್ ಪರಿಸರ ಹಿಡಿಸಲಿಲ್ಲವಾಗಿ ಪುನಃ ಸ್ವಿಟ್ಸರ್ಲೆಂಡಿಗೆ ಮರಳಿದ (1947). ಜೂರಿಕ್ ಸಮೀಪದ ಹೆರ್ಲ್‍ಬರ್ಗ್‍ನಲ್ಲಿ ನೆಲಸಿದ. ಈ ವೇಳೆಗಾಗಲೇ ಇವನ ತಾಯ್ನಾಡು ಪೂರ್ವಜರ್ಮನಿ ಹಾಗೂ ಪಶ್ಚಿಮ ಜರ್ಮನಿ ಎಂದು ಇಬ್ಭಾಗವಾಗಿತ್ತು. ಪೂರ್ವಜರ್ಮನಿಯಲ್ಲಿ ತನ್ನ ರಂಗಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಸಿಗುವ ಭರವಸೆ ದೊರಕಿದುದರಿಂದ ಅಲ್ಲೆ ನೆಲಸಲು ತೀರ್ಮಾನಿಸಿದ (1948). ಅಲ್ಲಿ ಬರ್ಲಿನರ್ ಎನ್‍ಸೆಂಬಲ್ ಸಂಸ್ಥೆಯ ಸಲಹೆಗಾರನಾಗಿ ತೀವ್ರ ರಂಗಚಟುವಟಿಕೆಗಳಲ್ಲಿ ನಿರತನಾದ. ಇವನ ನೇತೃತ್ವದಲ್ಲಿ ಈ ಸಂಸ್ಥೆ ಪ್ರಪಂಚದ ಅತ್ಯುತ್ತಮ ನಾಟಕ ಸಂಸ್ಥೆಯಾಗಿ ರೂಪುಗೊಂಡು ಪ್ರಸಿದ್ಧವಾಯಿತು. ಈತ ಪ್ರಯಾಣ ಸ್ವಾತಂತ್ರ್ಯದ ದೃಷಿಯಿಂದ 1950ರಲ್ಲಿ ಆಸ್ಟ್ರಿಯನ್ ಪೌರತ್ವ ಪಡೆದುಕೊಂಡ. 1951ರಲ್ಲಿ ಇವನಿಗೆ ಪೂರ್ವ ಜರ್ಮನಿ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1955ರಲ್ಲಿ ಸ್ಟಾಲಿನ್ ಶಾಂತಿ ಪ್ರಶಸ್ತಿ ದೊರಕಿತು. ಅದೇ ವರ್ಷ ಪ್ಯಾರಿಸ್ಸಿನಲ್ಲಿ ನಡೆದ ಅಂತರರಾಷ್ಟ್ರೀಯ ನಾಟಕೊತ್ಸವದಲ್ಲಿ ಬ್ರೆಕ್ಟ್ ನಾಟಕಗಳು ಮುಕ್ತ ಕಂಠದ ಪ್ರಶಂಸೆಗೊಳಗಾದವು. ಶ್ವಾಸಕೋಶದ ಉರಿಯೂತದಿಂದಾಗಿ ಬ್ರೆಕ್ಟ್ 1956 ಆಗಸ್ಟ್ 19ರಂದು ಪೂರ್ವಬರ್ಲಿನ್‍ನಲ್ಲಿ ನಿಧನ ಹೊಂದಿದ. ಹ್ಯಾಗ್‍ನಾಟ್ ಸಮಾಧಿ ಭೂಮಿಯಲ್ಲಿ ಇವನ ಸಮಾಧಿ ಮಾಡಲಾಯಿತು.

	ಬ್ರೆಕ್ಟ್ 40ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾನೆ. ಇವನ್ನು ಸ್ಥೂಲವಾಗಿ ಅಭಿವ್ಯಕ್ತವಾದಿ ನಾಟಕಗಳು, ನೀತಿಪರನಾಟಕಗಳು, ಸಂಗೀತನಾಟಕಗಳು, ವಾಸ್ತವವಾದಿ ನಾಟಕಗಳು, ಮಹೋನ್ನತ ನಾಟಕಗಳು ಎಂದು ವಿಭಾಗಿಸಬಹುದು. ಬಾಲ್ (1918), ಡ್ರಮ್ ಇನ್ ದಿ ನೈಟ್ (1922), ಇನ್ ದಿ ಜಂಗಲ್ ಆಫ್ ದಿ ಸಿಟೀಸ್ (1923) ಇವು ಇವನ ಆರಂಭದ ಕೃತಿಗಳು. ದಿ ಡಿಡಾಕ್ಟಿಕ್ ಪ್ಲೇ ಆಫ್ ಬಾಡನ್: ಅನ್ ಕನ್‍ಸೆಂಟ್ (1929), ದಿ ಮೆಷರ್ಸ್ ಟೇಕನ್ (1930), ದಿ ಎಕ್ಸೆಪ್‍ಷನ್ ಅಂಡ್ ದಿ ರೂಲ್ (1930), ದಿ ಮದರ್ (1932), ದಿ ತ್ರಿ ಪೆನಿ ಅಪೆರಾ (1928), ರೈಸ್ ಅಂಡ್ ಫಾಲ್ ಆಫ್ ದಿ ಸಿಟಿ ಆಫ್ ಮಹಗೊನಿ (1930) ಇವು ಸಂಗೀತ ನಾಟಕಗಳು. ದಿ ಲೈಫ್ ಆಫ್ ಗೆಲಿಲಿಯೋ (1938), ದಿ ಗುಡ್ ಉಮನ್ ಆಫ್ ಸೆಜುವಾನ್ (1943), ಮದರ್ ಕರೇಜ್ ಅಂಡ್ ಹರ್ ಚಿಲ್ಡ್ರನ್ (1941), ಕಕೇಸಿಯನ್ ಚಾಕ್ ಸರ್ಕಲ್ (1948), ಮಿಸ್ಟರ್ ಪುಂಟಿಲ ಅಂಡ್ ಹಿಸ್ ಹೈರ್ಡ್‍ಮ್ಯಾನ್ ಮಟ್ಟಿ (1941) ಇವು ಬ್ರೆಕ್ಟ್‍ನ ಪರಿಪಕ್ವ ಕೃತಿಗಳೆಂದು ಪ್ರಸಿದ್ಧವಾಗಿವೆ.

	ಎಪಿಕ್ ಥಿಯೇಟರ್ (ಮುಕ್ತರಂಗಭೂಮಿ) ಸಿದ್ಧಾಂತ ಇಪ್ಪತ್ತನೆಯ ಶತಮಾನದ ಆಧುನಿಕ ರಂಗಭೂಮಿಗೆ ಬ್ರೆಕ್ಟ್ ನೀಡಿದ ಬಲು ದೊಡ್ಡ ಕೊಡುಗೆ ಎನ್ನಬಹುದು. ಬ್ರೆಕ್ಟ್‍ನ ಸಿದ್ಧಾಂತ ಸಾಂಪ್ರದಾಯಿಕ ರಂಗಭೂಮಿ ಸಿದ್ಧಾಂತಕ್ಕಿಂತ ಭಿನ್ನವಾದದ್ದು. ಸಾಂಪ್ರದಾಯಿಕ ರಂಗಭೂಮಿ ರಸಾನಂದವನ್ನೇ ಪ್ರಧಾನವಾಗಿ ಗಣಿಸಿದರೆ ಎಪಿಕ್ ಥಿಯೇಟರ್ ಪ್ರೇಕ್ಷಕನಿಂದ ರಸಾನಂದದ ಜೊತೆಗೆ ಚಿಂತೆಯನ್ನೂ ಆಲೋಚನೆಯನ್ನೂ ಬೇಡುತ್ತದೆ. ಅರಿವಿಗಾಗಿ ರಂಗಭೂಮಿ ಎಂಬುದು ಬ್ರೆಕ್ಟ್‍ವ ನಿಲವಾಗಿತ್ತು. ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದರ ಮೂಲಕ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಬ್ರೆಕ್ಟ್ ನಂಬಿದ. ಹಾಗಾಗಿ ಹೊಸ ನೆಲೆಯಲ್ಲಿ ನಾಟಕವನ್ನೂ ರಂಗಭೂಮಿಯನ್ನೂ ನೋಡತೊಡಗಿದ. ಅದಕ್ಕೆ ಬೇಕಾದ ಪರಿಕರಗಳನ್ನು ಬಳಸಿಕೊಂಡ. ಹಾಗೆ ನೋಡಿದರೆ ಎಪಿಕ್ ಥಿಯೇಟರ್ ಕಲ್ಪನೆ ಬ್ರೆಕ್ಟ್ ಮೊತ್ತಮೊದಲಬಾರಿಗೆ ಪ್ರತಿಪಾದಿಸಿದ್ದಲ್ಲ. 1920ರ ದಶಕದಲ್ಲಿ ಅರ್ವಿನ್ ಪಿಸ್ಟೇಟರ್ ಎಂಬಾತ ಜರ್ಮನ್ ರಂಗಭೂಮಿಯಲ್ಲಿ ಈ ನಾಟಕ ತಂತ್ರವನ್ನು ಬಳಸಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದ. ಬ್ರೆಕ್ಟ್ ಅದಕ್ಕೊಂದು ವಿಶಿಷ್ಟ ರೂಪ ಕೊಟ್ಟು ಪ್ರಚುರ ಪಡಿಸಿದ ಮತ್ತು ಪ್ರಪಂಚ ವಿಖ್ಯಾತ ಮಾಡಿದ.

	ಒಳ್ಳೆಯದು ಕೆಟ್ಟದರ ಸಂಘರ್ಷವೇ ಬ್ರೆಕ್ಟ್ ನಾಟಕಗಳ ಕೇಂದ್ರಬಿಂದು. ಸಂಗೀತ ಮತ್ತು ಹಾಡುಗಳು ಇವನ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾಟಕದಲ್ಲಿ ಸಂಗೀತ ಕೇವಲ ತನ್ಮಯತೆಗಾಗಿ ಅಲ್ಲ, ಭಾವಗಳ ಅಭಿವ್ಯಕ್ರಿಗಾಗಿ ಕೂಡ ಹೌದು ಎಂಬುದು ಬ್ರೆಕ್ಟ್‍ನ ಅಭಿಪ್ರಾಯ. ದಿ ತ್ರಿ ಪೆನ್ನಿ ಅಪೆರಾ (1928) ಎಂಬ ಸಂಗೀತನಾಟಕದ ಮೂಲಕ ಬ್ರೆಕ್ಟ್ ತನ್ನ ಎಪಿಕ್ ಥಿಯೇಟರ್ ಕಲ್ಪನೆಯನ್ನು ಬಹಿರಂಗ ಪಡಿಸಿದ. ಬೆಕ್ಟ್ ಅನೇಕ ಪ್ರಭಾವಗಳಿಗೆ ಋಣಿಯಾಗಿದ್ದಾನೆ. ವಸ್ತು, ಭಾಷೆ, ಸಂಗೀತ ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟಂತೆ ಹೇಳುವುದಾದರೆ ಈತ ಇತರೆಡೆಗಳಿಂದ ಪಡೆದಿರುವುದೇ ಹೆಚ್ಚು. ಆದರೆ ಅವನ್ನು ಬಳಸಿಕೊಳ್ಳುವುದರಲ್ಲಿ ಸ್ವಂತಿಕೆ ಸ್ಥಾಪಿಸಿದ್ದಾನೆ. ಆಸ್ಟ್ರಿಯನ್, ಬವೇರಿಯನ್ ಜನಪದ ಹಾಸ್ಯ ನಾಟಕಗಳು ಇವನ ನಾಡಕಗಳ ಮೇಲೆ ಗಾಢ ಪ್ರಭಾವ ಬೀರಿವೆ. ಜನಪದ ಸಂಗೀತ, ಜನಪದ ಕಥನ ಕಲೆಯನ್ನು ಬ್ರೆಕ್ಟ್ ಶಕ್ತವಾಗಿ ತನ್ನ ನಾಟಕಗಳಲ್ಲಿ ಅಳವಡಿಸಿಕೊಂಡ. ಕಾರ್ಲ್ ವ್ಯಾಲೆಂಟಿನ್‍ನ ನಾಟಕಗಳು, ಜಪಾನಿ ನೋ ನಾಟಕಗಳೂ, ಚಾರ್ಲಿ ಜಾಪ್ಲಿನ್ ಕೇಟನ್ ಮತ್ತು ಮಾಕ್ರ್ಸ್ ಸಹೋದರರ ಚಿತ್ರಗಳು ಕೂಡ ಬ್ರೆಕ್ಟ್‍ಗೆ ಸಹಾಯಮಾಡಿದುವು. ಹಿಂದಿನ ಅನೇಕ ಕವಿಗಳ (ಉದಾಹರಣಿಗೆ ಷೇಕ್ಸ್‍ಪಿಯರ್, ಷಿಲ್ಲರ್, ಗಯಟೆ ಮುಂತಾದವರು) ಮಾತುಗಳನ್ನು, ಬೈಬಲ್ ನುಡಿಗಟ್ಟುಗಳನ್ನು ಯಥೇಚ್ಛವಾಗಿ ತನ್ನ ನಾಟಕಗಳಲ್ಲಿ ಬಳಸಿಕೊಂಡಿದ್ದಾನೆ. ಆದರೆ ಹಳೆಯ ವಸ್ತುಗಳಿಗೆ ವರ್ತಮಾನದ ಸ್ತರದಲ್ಲಿ ಹೊಸ ಹೊಳಹುಗಳನ್ನು ನೀಡಿದ್ದಾನೆ; ಹೊಸ ಅರ್ಥ ಪರಂಪರೆಯನ್ನು ಹೊರಡಿಸಿದ್ದಾನೆ. ಬ್ರೆಕ್ಟ್‍ನ ನಾಟಕದ ಭಾಷೆ ಸಶಕ್ತವಾದದ್ದು. ವೀರ್ಯವತ್ತಾದದ್ದು. ಆ ತನಕ ಜರ್ಮನ್ ಸಾಹಿತ್ಯದಲ್ಲಿ ಬಳಸದ ತನ್ನದೇ ಆದ ಹೊಸ ಭಾಷೆಯೊಂದನ್ನು ಬ್ರೆಕ್ಟ್ ತನ್ನ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಿಕೂಂಡ. ಬ್ರೆಕ್ಟ್ ನಾಟಕಗಳಲ್ಲಿ ಪಾತ್ರಗಳಿಗಿಂತ ಘಟನೆ ಮತ್ತು ಸಮಸ್ಯೆ ಬಹಳ ಮುಖ್ಯವಾಗುತ್ತವೆ. ಹಾಗೆಯೇ ಬ್ರೆಕ್ಟ್ ನಾಟಕಗಳು ಪ್ರಧಾನವಾಗಿ ರಂಗಭೂಮಿ ನಾಟಕಗಳು. ಅವು ಓದಿಗಿಂತ ಪ್ರದರ್ಶನದಲ್ಲಿ ಹೆಚ್ಚು ಜೀವಂತಿಕೆ ಪಡೆದುಕೊಳ್ಳುತ್ತವೆ.

	ಬ್ರೆಕ್ಟ್ ಕವಿಯಾಗಿ ಕೂಡ ಒಳ್ಳೆಯ ಹೆಸರು ಮಾಡಿದ್ದಾನೆ. ವರ್ಸಸ್ ಅಂಡ್ ಸಾಂಗ್ಸ್ (1956) ಎಂಬುದು ಇವನ ಪ್ರಾತಿನಿಧಿಕ ಕವನ ಸಂಕಲನ. ತ್ರಿಪೆನ್ನಿ ನಾವೆಲ್ (1934) ಎಂಬ ಕಾದಂಬರಿಯನ್ನೂ ಬರೆದಿದ್ದಾನೆ. ಕ್ಯಾಲೆಂಡರ್ ಟೇಲ್ಸ್ (1948) ಎಂಬುದು ಸಣ್ಣಕತೆಗಳ ಸಂಕಲನ. ಜರ್ಮನಿಯ ಬ್ರೆಕ್ಟ್ ಪತ್ರಾಗಾರರಲ್ಲಿ ಇವನ ಸಮಗ್ರ ಕೃತಿಗಳನ್ನು ಸಂಗ್ರಹಿಸಿಡಲಾಗಿದೆ.

	ಕನ್ನಡ ರಂಗಭೂಮಿಯ ಮೇಲೆ ಬ್ರೆಕ್ಟ್‍ನ ಪ್ರಭಾವ ಗಾಢವಾಗಿ ಆಗಿದೆ. ಕಕೇಸಿಯನ್ ಚಾಕ್ ಸರ್ಕಲ್ (ಜಿ. ಎನ್. ರಂಗನಾಥರಾವ್), ಗೆಲಿಲಿಯೋ (ಜೆ. ಆರ್. ಲಕ್ಷ್ಮಣರಾವ್ ಮತ್ತು ಎಚ್. ಕೆ. ರಾಮಚಂದ್ರಮೂರ್ತಿ) ಎಂಬ ನಾಟಕಗಳು ಕನ್ನಡಕ್ಕೆ ಅನುವಾದವಾಗಿವೆ. ರಂಗಭೂಮಿಯಮೇಲೆ ಪ್ರದರ್ಶಿತವಾಗಿವೆ. ಆನೆಮರಿ (ಮೂಲ: ದಿ ಬೇಬಿ ಎಲಿಫೆಂಟ್), ಸತ್ಯವಂತರಿಗಿದು ಕಾಲವಲ್ಲ (ಮೂಲ: ದಿ ಗುಡ್ ಉಮನ್ ಆಫ್ ಸೆಜುವಾನ್), ತಾಯಿ (ಮೂಲ: ಮದರ್), ಅಪವಾದ ಮತ್ತು ನಿಯಮ (ಮೂಲ: ಎಕ್ಸೆಪ್‍ಷನ್ ಅಂಡ್ ದಿ ರೂಲ್)-ಈ ನಾಟಕಗಳು ಕೂಡ ರಂಗಭೂಮಿಯಲ್ಲಿ ಪ್ರಯೋಗ ಕಂಡಿವೆ. ಎಚ್. ಎಮ್ ಚನ್ನಯ್ಯ ಬ್ರೆಕ್ಟ್ ನಾಟಕಗಳಿಂದ ನೇರವಾಗಿ ಪ್ರಭಾವಿತರಾಗಿ ಎಲ್ಲರಂಥವನಲ್ಲ ನನ್ನ ಗಂಡ, ಹುಯ್ಯೆಲವೊ ಡಂಗುರವ ಎಂಬ ಎರಡು ನಾಟಕಗಳನ್ನು ರಚಿಸಿದ್ದಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
											*